ಗ್ರೆಕೋ, ಎಲ್

1541-1614. ಸ್ಪೇನಿನ ಪ್ರಸಿದ್ಧ ವರ್ಣಚಿತ್ರಗಾರ. ಈತನ ನಿಜ ನಾಮಧೇಯ ಡೊಮೆನಿಕೊಸ್ ಥಿಯೊಟೊಕೊಪೊಲೊಸ್. ಇಟಲಿಯಲ್ಲಿ ಈತನನ್ನು ಎಲ್ ಗ್ರೆಕೊ ಎಂದೂ ಸ್ಪೇನಿನಲ್ಲಿ ಡೊಮೆನಿಕೊ ಗ್ರೆಕೊ ಎಂದೂ ಹೆಸರಿಸಿದ್ದಾರೆ. ಆದರೆ ರೂಢಿಯಲ್ಲಿ ಈತ ಎಲ್ ಗ್ರೆಕೊ ಎಂದೇ ಪ್ರಸಿದ್ಧನಾಗಿದ್ದಾನೆ. ಕ್ರೀಟಿನಲ್ಲಿ ಹುಟ್ಟಿದ ಈತನ ಬಾಲ್ಯ ಜೀವನದ ಮಾಹಿತಿ ಅಷ್ಟಾಗಿ ಸಿಗುವುದಿಲ್ಲ. ಕ್ರೀಟ್ ದ್ವೀಪದ ಕ್ರೈಸ್ತ ಸಂನ್ಯಾಸಿಗಳು ಈ ಬಾಲಕನಿಗೆ ಬಹುಶಃ ಶಿಕ್ಷಣ ನೀಡಿರಬೇಕು. ಅನಂತರ ಈತ ವೆನಿಸ್ ನಗರಕ್ಕೆ ಬಂದು ಟಿಷಿಯನ್ ಚಿತ್ರಶಾಲೆಯಲ್ಲಿ ಅಭ್ಯಾಸ ಮಾಡಿದ್ದು ಬಸಾನೊನ ಸಂಪರ್ಕ ಬಹುಶಃ ಈತನಿಗಿದ್ದಿರಬೇಕು ಅನಿಸುತ್ತದೆ. ಅಲ್ಲದೆ ಟಿಂಟೊರೆಟ್ಟೊನ್ ಶಿಷ್ಯನೂ ಆಗಿದ್ದನೆಂದು ಕೆಲವು ಮೂಲಗಳಿಂದ ತಿಳಿದು ಬರುತ್ತದೆ. ಮೈಕೆಲೇಂಜಲೊ ಮತ್ತು ರಾಫೆಲ್‍ರಂಥ ಶ್ರೇಷ್ಠ ಕಲಾವಿದರ ಪ್ರಭಾವವೂ ಈತನ ಮೇಲೆ ಆಗಿರಬಹುದು. ಪ್ಯೂರಿಫಿಕೇಷನ್ ಆಫ್ ದಿ ಟೆಂಪಲ್ ಎಂಬ ಕೃತಿಯಲ್ಲಿ ಇದು ಸೂಚ್ಯವಾಗುತ್ತದೆ.

ಈತ 1569 ರಲ್ಲಿ ರೋಮಿಗೆ ಬಂದ. ಅಲ್ಲಿ ಮೈಕೆಲೇಂಜಲೊ ರಚಿಸಿದ್ದ ಲಾಸ್ಟ ಜಜ್‍ಮೆಂಟ್ ಎಂಬ ವರ್ಣ ಚಿತ್ರವನ್ನು ಈತ ಪುನಾರಚಿಸಿದ. ಅಲ್ಲಿಂದ ಮುಂದೆ ಸ್ಪೇನಿಗೆ ತೆರಳಿದ. ಯಾವಾಗ ಎಂಬುದು ಸ್ಪಷ್ಟವಾಗಿಲ್ಲ. ಅಂತೂ 1577 ರ ಹೊತ್ತಿಗೆ ಆ ದೇಶದ ಟೊಲೊಡೋದಲ್ಲಿ ಈತ ಇದ್ದ. ತನ್ನದೇ ಆದ ವಿಶಿಷ್ಟ ಶೈಲಿಯೊಂದನ್ನು ಈತ ಮೈಗೂಡಿಸಿಕೊಂಡದ್ದು ಇಲ್ಲಿಯೇ. ಅಲ್ಲಿ ಗ್ರೆಕೊ ಸ್ಥಪತಿಯಾಗಿ, ಶಿಲ್ಪಿಯಾಗಿ, ವರ್ಣ ಚಿತ್ರಗಾರನಾಗಿ ಪ್ರಸಿದ್ಧಿ ಪಡೆದು, ಹೇರಳ ಹಣ ಮಾಡಿ, ಅದ್ದೂರಿ ಜೀವನ ನಡೆಸಿದ. ಎರಡನೆಯ ಫಿಲಿಪ್ ತನ್ನ ಆಸ್ಥಾನ ಚಿತ್ರಗಾರ ಎಲ್ ಮುಡೊನ ಮರಣಾನಂತರ (1579) ಈತನನ್ನು ಮ್ಯಾಡ್ರಿಡಿಗೆ ಕರೆದೊಯ್ದು. ಅಲ್ಲಿ ಈತ ಬೃಹತ್ ಪಟಗಳ ಮೇಲೆ ಧಾರ್ಮಿಕ ಚಿತ್ರಗಳನ್ನು ರಚಿಸುವ ಕಾರ್ಯವನ್ನು ಮುಂದುವರಿಸಿದ.
ಗ್ರೆಕೊ ಮೂಲತಃ ಒಬ್ಬ ಧಾರ್ಮಿಕ ಕ್ರೈಸ್ತ ಧರ್ಮಕ್ಕೆ ಸಂಬಂಧಪಟ್ಟಂತೆ ಹಲವು ವಸ್ತುಗಳನ್ನು ವಿವಿಧ ರೀತಿಯಲ್ಲಿ ಚಿತ್ರಿಸಿದ್ದಾನೆ. ಒಂದೇ ವಸ್ತುವಿಗೆ ಅನೇಕ ಕಲಾರೂಪಗಳನ್ನೂ ಕೊಟ್ಟು ತನ್ನದೇ ಆದ ವಿವಿಧ ಭಂಗಿಗಳನ್ನು ವರ್ಣ ಚಿತ್ರಗಳಲ್ಲಿ ಈತ ತುಂಬಿದ್ದಾನೆ. ಚರ್ಚಿನ ಅನೇಕ ಧರ್ಮಾಧಿಕಾರಿಗಳ ಭಾವಚಿತ್ರಗಳನ್ನು ಭಾವನಾತ್ಮಕವಾಗಿ ಚಿತ್ರಿಸಿದ್ದಾನೆ. ಹೀಗಾಗಿ ಹಲವಾರು ಚರ್ಚುಗಳಲ್ಲಿ ಕಾನ್ವೆಂಟುಗಳಲ್ಲಿ ಈತನ ಕೃತಿಗಳನ್ನು ಕಾಣಬಹುದು.

ಗ್ರೆಕೊ ಒಬ್ಬ ಸಂಕೀರ್ಣ ಕಲಾವಿದನೂ ಹೌದು. ಏಕೆಂದರೆ ಈತನ ಕೆಲವು ಕೃತಿಗಳನ್ನು ನೇರವಾಗಿ ಅರ್ಥವಿಸುವುದು ಕಷ್ಟವಾಗುತ್ತದೆ. ಅವನ್ನು ಬಹುತೇಕವಾಗಿ ಸಾಂಕೇತಿಕ ಚಿತ್ರಗಳೆಂದು ಕರೆದರೂ ಆದೀತು. ಅಲ್ಲದೆ ಸೇಂಟ್ ಜಾನ್ ಆಫ್ ದಿ ಕ್ರಾಸ್‍ನಂಥ ಸಮಕಾಲೀನ ಅನುಭಾವಿ ಸಂನ್ಯಾಸಿಗಳ ಪ್ರಭಾವವನ್ನೂ ಈತನ ಕೆಲವು ಚಿತ್ರಗಳಲ್ಲಿ ಕಾಣಬಹುದು. ದಿ ಅಸಂಪ್ಷನ್ ಆಫ್ ದಿ ವರ್ಜಿನ್, ದಿ ಕ್ರೈಸ್ಟ್ ಸ್ಟ್ರಿಪ್‍ಡ್ ಆಫ್ ಹಿಸ್ ಗಾರ್ಮೆಂಟ್ ಮುಂತಾದ ಕೃತಿಗಳನ್ನು ಇಲ್ಲಿ ಉದಾಹರಿಸಬಹುದು. ದಿ ಬರಿಯಲ್ ಆಫ್ ಕೌಂಟ್ ಆರ್ಗಜ್ (1586) ಎಂಬುದು ಇಂದಿಗೂ ಈತನ ಮೇರುಕೃತಿ ಎನಿಸಿದೆ.

ಗ್ರೆಕೊ ರಚಿಸಿದ ಚಿತ್ರರಾಶಿಯಲ್ಲಿ ಕೆಲವು ವೈಶಿಷ್ಟ್ಯಗಳನ್ನು ಕಾಣಬಹುದು. ಈತನ ಹಲವು ಕೃತಿಗಳಲ್ಲಿ ಬೈಜಾಂಟಿನ್ ಮತ್ತು ವೆನಿಸ್ ಶೈಲಿಗಳ ಪ್ರಭಾವ ಕಾಣುತ್ತದೆ. ಈತನ ಕೊನೆಯ ಕೃತಿಗಳಲ್ಲಿ ಬೈಜಾóಂಟಿನ್ ಶೈಲಿಯದೇ ಮೇಲುಗೈಯಾಗಿದೆಯೆಂದೂ ಹೇಳಬಹುದು. ಅವುಗಳಲ್ಲಿ ಧಾರ್ಮಿಕ ಭಾವ ತುಂಬಿರುವುದೂ ಒಂದು ವಿಶೇಷ ಗುಣ. ನೆರಳು-ಬೆಳಕುಗಳ ವಿಶೇಷ ಪರಿಣಾಮವನ್ನೂ ಕಣ್ಣಿಗೆ ಚುಚ್ಚುವ ನೇರಬಣ್ಣಗಳ ಉಪಯೋಗವನ್ನೂ ಬಹುತೇಕವಾಗಿ ಲಂಬಿತ ಆಕೃತಿಗಳನ್ನೇ ಚಿತ್ರಿಸಿರುವುದನ್ನೂ ಈತನ ಕೃತಿಗಳಲ್ಲಿ ನೋಡಬಹುದಾಗಿದೆ. ಆರಿಸಿಕೊಂಡ ವಸ್ತು ಅದಕ್ಕೆ ಕಲಾವಿದ ಕೊಟ್ಟ ರೂಪಗಳ ನಡುವಣ ಹೊಂದಾಣಿಕೆಯನ್ನು ಈತನ ಎಲ್ಲ ಚಿತ್ರಗಳೂ ಪ್ರದರ್ಶಿಸುತ್ತದೆ. ಈತನ ಚಿತ್ರಗಳಲ್ಲಿ ಅಸಾಧಾರಣವಾದ ಒಂದು ಸ್ವಂತಿಕೆಯೂ ಇದೆ. ಈ ವ್ಯಕ್ತಿನಿಷ್ಠ ಸ್ವಂತಿಕೆಯನ್ನು ಈತ ನಿಷ್ಠುರವಾಗಿ ಉಳಿಸಿಕೊಂಡು ಬಂದ. ಪರಿಣಾಮವಾಗಿ ಈತ ಒಂಟಿಯಾಗಿಯೇ ಉಳಿದ. 19 ನೆಯ ಶತಮಾನದ ಕೊನೆಯವರೆಗೂ ಸ್ಪೇನಿನಿಂದ ಹೊರಗೆ ಅಪರಿಚಿತನಾಗಿದ್ದ. ಅನಂತರ 20 ನೆಯ ಶತಮಾನದ ಪೂರ್ವಾರ್ಧದಲ್ಲಿ ಫ್ರೆಂಚ್ ಕಲಾವಿದರು ಈತನ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತಂದರು. ಈತನ ಹಲವಾರು ಕೃತಿಗಳನ್ನು ಇಂದು ಅಮೆರಿಕ, ಇಂಗ್ಲೆಂಡ್, ಇಟಲಿ, ಫ್ರಾನ್ಸ್‍ಗಳ ಚಿತ್ರಶಾಲೆಗಳಲ್ಲಿ ನೋಡಬಹುದಾಗಿದೆ. ಟೊಲೆಡೋದಲ್ಲಿ ಈತನ ಸ್ಮಾರಕರ್ಥವಾಗಿ ಒಂದು ಸಂಗ್ರಹಾಲಯವಿದೆ.
(ಎಚ್.ಆರ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ